ಕಾಬಾ

 ಸೌದಿ ಅರೇಬಿಯದಲ್ಲಿ ಮಹಮ್ಮದನ ಜನ್ಮಸ್ಥಳವಾದ ಮೆಕ್ಕದಲ್ಲಿನ ದೊಡ್ಡ ಮಸೀದಿಯ ಪ್ರಾಂಗಣದಲ್ಲಿರುವ ಘನಾಕೃತಿಯ ಕಪ್ಪು ಶಿಲಾಕಟ್ಟಡವಿದು. ಬಹು ಹಿಂದಿನಿಂದ ಮುಸ್ಲಿಮರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಅರಬೀ ಭಾಷೆಯಲ್ಲಿ ಕಾಬಾ ಪದಕ್ಕೆ ಚೌಕಾಕಾರದ ಕಟ್ಟಡ ಎಂದರ್ಥವಿದೆ. ಇದನ್ನು ಕಾಬಾಶಿಲೆಯೆಂದೇ ಕರೆಯುತ್ತಾರೆ. ಇದರ ನಿರ್ಮಾತೃ ಆದಂನೆಂದೇ ಮುಸ್ಲಿಮರ ನಂಬಿಕೆ. ಇಸ್ಲಾಂ ಮತ ಹುಟ್ಟುವುದಕ್ಕೆ ಮುಂಚೆ ಈ ಸ್ಥಳ ಅರಬರ ಪೂಜಾಸ್ಥಳವಾಗಿತ್ತು. ಮಹಮ್ಮದ್ ಮೆಕ್ಕವನ್ನು ಗೆದ್ದು ಅವರನ್ನು ಮುಸ್ಲಿಮ್ಮರಾಗಿ ಪರಿವರ್ತಿಸಿದ ಅನಂತರ ಅಲ್ಲಿನ ಪೂಜಾಸ್ತಂಭಗಳನ್ನು ಕೀಳಿಸಿ ಪ್ರಾರ್ಥನಾಮಂದಿರ ನಿರ್ಮಿಸಿದ. ಆ ಕಲ್ಲುಗಳಲ್ಲಿ ಕರಿಯ ಕಲ್ಲೊಂದನ್ನು ಏಬ್ರಹಾಂನ (ಇಬ್ರಾಹಿಂ) ಜ್ಞಾಪಕಾರ್ಥವಾಗಿ ಉಳಿಸಿದ. ಆ ಕಪ್ಪು ಕಲ್ಲು ಮುಸ್ಲಿಮರ ಪೂಜ್ಯ ವಸ್ತುವಾಯಿತು. ಇಂದಿಗೂ ಮುಸ್ಲಿಮರ ಕಾಬಾ ದಿಕ್ಕಿನ ಕಡೆ ಮುಖ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ.

 

(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ